ವಿಷಯಕ್ಕೆ ಹೋಗು

ಕರ್ಣ

ವಿಕಿಪೀಡಿಯರ್ದ್
ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ.ಇದು ೧೮೨೦ ರಲ್ಲಿ ಬಟ್ಟೆಯ ಮೇಲೆ ರಚಿಸಲಾದ ಒಂದು ಜಲವರ್ಣ ಚಿತ್ರ.

ಕರ್ಣ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ ಕುಂತಿಯ ಮೊದಲ ಪುತ್ರ ಮತ್ತು ದುರ್ಯೋಧನನ ಆಪ್ತ ಮಿತ್ರ. ಇವನ ತಂದೆ ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು ಅಂಗ ದೇಶದ ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ.[]

  • ಇವನು ಸೂರ್ಯಮಂತ್ರದಿಂದ ಮದುವೆಗೆ ಮುನ್ನ ಕುಂತಿಯಲ್ಲಿ ಜನಿಸಿದವ. "ಕರ್ಣಂಗೊಡ್ಡಿತ್ತುದಲ್ ಭಾರತಂ" ಎಂಬ ಉಕ್ತಿಗೆ ಕಾರಣನಾದ ಮಹಾವೀರ. ಇವರ್ಗಳಿನೀ ಭಾರತಂ ಲೋಕಪುಜ್ಯಂ-ಎಂದು ಹೇಳುವಲ್ಲಿ ಪಂಪ ಕರ್ಣನನ್ನು ಕುರಿತು ನನ್ನಿಯೊಳಿನತನಯಂ ಎಂದು ಪ್ರಶಂಸಿಸಿದ್ದಾನೆ. ಕುಂತಿಭೋಜನ ಮನೆಯಲ್ಲಿದ್ದ ಕುಂತಿ ದೂರ್ವಾಸನನ್ನು ಸತ್ಕರಿಸಿದ್ದಕ್ಕಾಗಿ ಮಂತ್ರಗಳ ವರಪಡೆದಿದ್ದಳಷ್ಟೆ.
  • ಮಂತ್ರ ಮಾಹಾತ್ಮೆಯನ್ನು ಪರೀಕ್ಷಿಸಬೇಕೆಂಬ ಚಾಪಲ್ಯದಿಂದ ಸೂರ್ಯಮಂತ್ರ ಜಪಿಸಲು ಸೂರ್ಯನಾರಾಯಣ ಆಕೆಗೆ ಗಂಡು ಮಗುವನ್ನು ಅನುಗ್ರಹಿಸಿದ. ಲೋಕಾಪವಾದಕ್ಕೆ ಹೆದರಿದ ಕುಂತಿ ತನ್ನ ಮರುಳುತನಕ್ಕಾಗಿ ಬೆದರಿ ಆ ಹಸುಗೂಸನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು. ಅದು ಧೃತರಾಷ್ಟ್ರನ ಸಾರಥಿ ಅಧಿರಥನ ಕೈಗೆ ಸಿಕ್ಕಿತು.
  • ಕವಚ ಕುಂಡಲಗಳ ಸಮೇತನಾಗಿ ಹುಟ್ಟಿದ ಆಕಾರಣಿಕ ಶಿಶುವನ್ನು ಅಧಿರಥ ತನ್ನ ಹೆಂಡತಿ ರಾಧೆಯ ಕೈಗೆ ಕೊಟ್ಟ. ಅಪೂರ್ವ ತೇಜೋಶಾಲಿಯಾದ ಆ ಮಗುವಿಗೆ ವಸುಷೇಣನೆಂದು ಹೆಸರಿಟ್ಟರು. ದಿನ ಕಳೆದಂತೆಲ್ಲ ಆ ಹುಡುಗನ ಕೀರ್ತಿ ಕರ್ಣಾಕರ್ಣಿಕೆಯಾಗಿ ಹರಡತೊಡಗಿದ್ದರಿಂದ ಅವನಿಗೆ ಕರ್ಣನೆಂಬ ಹೆಸರೇ ಪ್ರಚಾರಕ್ಕೆ ಬಂತು. ಇದಲ್ಲದೆ ಅವನಿಗೆ ರಾಧೇಯ, ಸೂತಪುತ್ರ, ಕಾನೀನನೆಂಬ ಸಂಬೋಧನೆಯೂ ಉಂಟು.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಸಂಪೊಲಿಪುಲೆ]
  • ಬಾಲ್ಯ ಕಳೆದು ಯೌವನ ಮೊದಲಾಗಲು ಕರ್ಣನಿಗೆ ಶಸ್ತ್ರ ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿತು. ಸೂತಪುತ್ರನಾದ ಅವನಿಗೆ ಶಸ್ತ್ರವಿದ್ಯಾಭ್ಯಾಸ ಕಲಿಸುವ ಆಚಾರ್ಯರು ದೊರೆಯಲಿಲ್ಲ. ಆಗ ಆತ ಪರುಶರಾಮನ ಬಳಿಗೆ ಬಂದು ತಾನು ವಿಪ್ರನೆಂದು ಸುಳ್ಳು ಹೇಳಿ ಧನುರ್ವಿದ್ಯಾಪಾರಂಗತ ನಾದ. ಒಂದು ದಿನ ಪರುಶುರಾಮ ಕರ್ಣನ ತೊಡೆಯಮೇಲೆ ತಲೆಯಿಟ್ಟು ನಿದ್ರಿಸುತ್ತಿದ್ದಾಗ, ಇಂದ್ರನ ಆಜ್ಞೆಯ ಮೇರೆಗೆ ಅಲರ್ಕವೆಂಬ ದುಂಬಿಯೊಂದು ಬಂದು ಆತನ ತೊಡೆಯನ್ನು ಬಗಿಯಲಾರಂಭಿಸಿತು.
  • ಆಗ ತಾನು ಅಲುಗಿದರೆ ಗುರುವಿಗೆ ನಿದ್ರಾಭಂಗವಾದೀತೆಂದು ಎಣಿಸಿ ಕರ್ಣ ತನಗಾದ ಅಗಾಧ ನೋವನ್ನು ಲಕ್ಷಿಸದೆ ಹಾಗೆಯೇ ತಡೆದುಕೊಂಡಿದ್ದ. ಅವನ ರಕ್ತದ ಸೋಂಕಿನಿಂದ ಪರುಶರಾಮ ಎಚ್ಚತ್ತು, ಶಿಷ್ಯನ ವರ್ತನೆಯನ್ನು ಕಂಡು ಮೆಚ್ಚಿದರೂ ಅವನು ವಿಪ್ರನಿರಲಾರನೆಂದೂ ಕ್ಷತ್ರಿಯನೇ ಇರಬೇಕೆಂದೂ ತಿಳಿದು ಕುಪಿತನಾದ.
  • ನಿಜವೃತ್ತಾಂತ ತಿಳಿದಾಗ ತನ್ನ ವ್ರತಭಂಗವಾದುದಕ್ಕೆ ಕೆರಳಿದ ಪರುಶುರಾಮ ವಿಪ್ರನೆಂದು ಸುಳ್ಳುಹೇಳಿ ಶಸ್ತ್ರವಿದ್ಯೆ ಕಲಿತಿದ್ದಕ್ಕಾಗಿ ಅವಸಾನ ಕಾಲದಲ್ಲಿ ತಾನು ಅನುಗ್ರಹಿಸಿದ ಮಹಾಸ್ತ್ರಗಳಾವುವೂ ಫಲಿಸದಿರಲಿ ಎಂದು ಕರ್ಣನಿಗೆ ಶಾಪವಿತ್ತ. ಗುರುಶಾಪದಿಂದ ಕರ್ಣ ನಿರ್ವಿಣ್ಣನಾದ. ಈ ವೇಳೆಗೆ ಹಸ್ತಿನಾವತಿಯಲ್ಲಿ ಪಾಂಡವರಿಗೂ ಕೌರವರಿಗೂ ದ್ರೋಣಾಚಾರ್ಯ ಶಸ್ತ್ರವಿದ್ಯೆಯನ್ನು ಕಲಿಸುತ್ತಿದ್ದ.
  • ಆ ರಾಜಪುತ್ರರ ವಿದ್ಯಾಪರಿಣತಿಯನ್ನು ಪ್ರದರ್ಶಿಸುವುದಕ್ಕಾಗಿ ಸಕಲ ಏರ್ಪಾಡುಗಳೂ ನಡೆದಿದ್ದುವು. ಆ ಸಭೆಯಲ್ಲಿ ಪಾಂಡವ ಮತ್ತು ಕೌರವರ ಶಸ್ತ್ರಕೌಶಲ ತಾನೇ ತಾನಾಗಿ ಮೆರೆಯಲಾರಂಭಿಸಿತ್ತು. ಅರ್ಜುನ ರಂಗಕ್ಕೆ ಪ್ರವೇಶಿಸುವುದೇ ತಡ, ಆತನನ್ನು ಅದ್ವಿತೀಯನೆಂದು ಗುರುಗಳು ಮೊದಲ್ಗೊಂಡು ಎಲ್ಲರೂ ಪ್ರಶಂಸಿಸಿದರು. ಈ ಮಾತುಗಳನ್ನು ಆಲಿಸಿದ ಕರ್ಣ ಮುಂದೆ ಬಂದು ತಾನು ಅರ್ಜುನನನ್ನು ಎದುರಿಸುವುದಾಗಿ ಸವಾಲುಹಾಕಿದ.
  • ಆಗ ಅಲ್ಲಿಯೇ ಇದ್ದ ಕೃಪಾಚಾರ್ಯ ಎದ್ದುನಿಂತು ಸೂತಪುತ್ರನಾದ ಕರ್ಣನನ್ನು ಅರ್ಜುನನೊಂದಿಗೆ ಸರಿಸಮನಾಗಿ ಭಾವಿಸಲು ಸಾಧ್ಯವಿಲ್ಲವೆಂದು ವಿರೋಧಿಸಿದ. ಈ ಅಸೂಯೆಯ ಮಾತುಗಳನ್ನು ಕೇಳಿ, ಆಗತಾನೆ ಭೀಮನಿಂದ ಪರಾಜಿತನಾಗಿದ್ದ ದುರ್ಯೋಧನ ಮುಂದೆ ಬಂದು ಕರ್ಣನ ಪರವಾಗಿ ವಾದಿಸಿ, ಅವನಿಗೆ ಅಂಗರಾಜ್ಯಾಭಿಷೇಕವನ್ನಿತ್ತು ಗೌರವಿಸಿದ.

ಪರಾಕ್ರಮಗಳು, ಉದಾರಗುಣ

[ಸಂಪೊಲಿಪುಲೆ]
  • ಅಂದಿನಿಂದ ಕರ್ಣನಿಗೂ ದುರ್ಯೋಧನನಿಗೂ ಅಸದೃಶವಾದ ಮೈತ್ರಿ ಮೊದಲಾಯಿತು. ದುರ್ಯೋಧನನ ಆಪ್ತಮಿತ್ರನಾದ ಕರ್ಣನ ಮೇಲ್ಮೆ ದಿನದಿನಕ್ಕೂ ವರ್ಧಿಸತೊಡಗಿತು. ದುಶ್ಯಾಸನ, ಶಕುನಿ ಮತ್ತು ಸೈಂಧವರೊಂದಿಗೆ ಕೂಡಿ ಕರ್ಣ ಅರಸನ ಎಲ್ಲ ಕಾರ್ಯಗಳಿಗೂ ಬೆಂಬಲವನ್ನಿತ್ತನಲ್ಲದೆ ಪಾಂಡವರ ವಿನಾಶ ಕಾರ್ಯದಲ್ಲಿ ಮುಂದಾಳಾಗಿ ದುಷ್ಟಚತುಷ್ಟಯರಲ್ಲಿ ಒಬ್ಬನೆನಿಸಿದ.
  • ಕರ್ಣನ ಪರಾಕ್ರಮ ಜನಜನಿತವಾಗಿ ಬೆಳಗಿದಂತೆಯೇ ಅವನ ದಾನಗುಣವೂ ವಿಖ್ಯಾತವಾಯಿತು. ಭೀಮ ದುರ್ಯೋಧನರಿಗೆ ಹೇಗೆ ಬದ್ಧವೈರವೋ ಹಾಗೆಯೇ ಕರ್ಣ ಅರ್ಜುನರಿಗೆ ಎಲ್ಲ ವಿಷಯಗಳಲ್ಲಿಯೂ ಸ್ಪರ್ಧೆ ನಡೆಯುತ್ತಿತ್ತು. ಅರ್ಜುನನ ಮೇಲ್ಮೈಯಲ್ಲಿ ಆಸಕ್ತನಾಗಿದ್ದ ಇಂದ್ರನಿಗೆ ಕರ್ಣನನ್ನು ಹೇಗಾದರೂ ಮಾಡಿ ನಿಶ್ಶಕ್ತನನ್ನಾಗಿ ಮಾಡಬೇಕೆಂಬ ಯೋಚನೆ ಬಲವಾಗಿ ಕಾಡಲಾರಂಭಿಸಿತು.
  • ಕರ್ಣನ ಉದಾರಗುಣವನ್ನು ಕೇಳಿದ ಆತ, ಒಂದು ದಿನ ವಿಪ್ರವೇಷದಲ್ಲಿ ಕರ್ಣನಲ್ಲಿಗೆ ಬಂದು ಆತನ ಕವಚಕುಂಡಲಗಳನ್ನು ಬೇಡಿದ. ಇಂದ್ರನ ಸಂಚನ್ನು ಮೊದಲೇ ತಿಳಿದ ಸೂರ್ಯ ಕರ್ಣನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಎಚ್ಚರಸಿದ್ದರೂ ಕರ್ಣ ತನ್ನ ಸಹಜಗುಣಕ್ಕೆ ಅನುಸಾರವಾಗಿ ತನಗೆ ರಕ್ಷೆಯಂತಿದ್ದ ಕವಚಕುಂಡಲಗಳನ್ನು ಮನಃಪೂರ್ವಕವಾಗಿ ಇಂದ್ರನಿಗೆ ಒಪ್ಪಿಸಿದ.
  • ಕರ್ಣನನ್ನು ಪರೀಕ್ಷಿಸಲು ಬಂದ ಇಂದ್ರನಿಗೆ ಆ ಸೂತಪುತ್ರನ ದಾನಗುಣವನ್ನು ಕಂಡು ಸಂತೋಷವಾಯಿತು. ತನ್ನ ನಿಜಸ್ವರೂಪವನ್ನು ತೋರಿಸಿ, ಅವನಿಗೆ ಶಕ್ತ್ಯಾಯುಧವನ್ನು ಅನುಗ್ರಹಿಸಿದ. ಕವಚಕುಂಡಲ ವಿಹೀನನಾದ ಕರ್ಣನಿಗೆ ಇಂದ್ರನಿತ್ತ ಶಕ್ತ್ಯಾಯುಧದಿಂದ ಮತ್ತೊಮ್ಮೆ ರೆಕ್ಕೆ ಬಂದಂ ತಾಯಿತು. ಕೌರವರ ಉಪಟಳಗಳಿಗೆ ಗುರಿಯಾಗಿದ್ದ ಪಾಂಡವರು, ಅರಗಿನ ಮನೆಯ ವಿಪತ್ತಿನಿಂದ ಪಾರಾಗಿ, ಏಕಚಕ್ರಪುರಿಯಲ್ಲಿ ಕೆಲವು ದಿನವಿದ್ದು, ವೇಷ ಮರೆಸಿಕೊಂಡು ದ್ರೌಪದಿಯ ಸ್ವಯಂವರಕ್ಕೆ ಬಂದಾಗ, ಪುನಃ ಅರ್ಜುನನಿಗೂ ಕರ್ಣನಿಗೂ ಸವಾಲು ಬೀಳುವ ಸನ್ನಿವೇಶ ಒದಗಿತು. ದ್ರುಪದ ಪಣವಾಗಿಟ್ಟಿದ್ದ ಮತ್ಸ್ಯಯಂತ್ರವನ್ನು ಕ್ಷತ್ರಿಯ ವೀರಾಧಿವೀರರು ಭೇದಿಸದೆ ಹೋಗಲು, ಕರ್ಣ ಆ ಸಾಹಸಕ್ಕಾಗಿ ಮುಂದೆ ಬಂದ.
  • ಶಸ್ತ್ರವಿದ್ಯಾಕುಶಲನಾದ ಆತ ಮತ್ಸ್ಯಕ್ಕೆ ಗುರಿಯಿಟ್ಟು ಬಾಣಬಿಡುವಷ್ಟರಲ್ಲಿ ದ್ರೌಪದಿ ಆತನನ್ನು ಸೂತಪುತ್ರನೆಂದು ಧಿಕ್ಕರಿಸಿದಳು. ಕರ್ಣ ಮ್ಲಾನವದನನಾಗಿ ಬಿಲ್ಲುಬಾಣಗಳನ್ನು ಕೆಳೆಗೆಸೆದು ತನ್ನ ಪೀಠದತ್ತ ಹಿಂತಿರುಗಿ ಬಂದ. ಅನಂತರ ಬ್ರಾಹ್ಮಣರ ಸಮೂಹದಲ್ಲಿ ವಿಪ್ರವೇಷಿಯಾಗಿದ್ದ ಅರ್ಜುನ ಎದ್ದುಬಂದು, ಜನ ಅಪಹಾಸ್ಯಮಾಡಿ ನಕ್ಕರೂ ಹಿಂತೆಗೆಯದೆ, ಮತ್ಸ್ಯಯಂತ್ರವನ್ನು ಭೇಧಿಸಿದ.
  • ಪಾಂಡವರಿಗೂ ಇತರ ರಾಜರಿಗೂ ಕಾಳಗವಾಗಿ, ಪಾಂಡವರು ವಿಜಯಿಗಳಾದರು. ಈ ಸಂದರ್ಭದಲ್ಲಿ ಅರ್ಜುನ ಮತ್ತು ಭೀಮರೊಂದಿಗೆ ಕರ್ಣ ಕಾದಾಡಬೇಕಾಯಿತು. ಕೌರವನ ಪಕ್ಷ ವಹಿಸಿದ ಕರ್ಣ ತನ್ನ ಸ್ವಾಮಿಯ ಅಭೀಷ್ಟಕ್ಕೆ ಅನುಗುಣವಾಗಿ ಪಾಂಡವರಿಗೆ ಅಹಿತಗಳನ್ನೇ ಬಯಸುತ್ತಿದ್ದ. ದ್ರೌಪದಿಯ ವಸ್ತ್ರಾಪಹರಣ ಕಾಲದಲ್ಲಿಯೂ ಆತ ಉಚಿತವಾಗಿ ವರ್ತಿಸಲಿಲ್ಲ. ಪಾಂಡವರು ವನವಾಸದಲ್ಲಿದ್ದಾಗ ದುರ್ಯೋಧನನನ್ನು ಪ್ರಚೋದಿಸಿ ಅವರ ಮೇಲೆ ಎರಗುವಂತೆ ಏರ್ಪಡಿಸಿದ.
  • ಆಗ ಗಂಧರ್ವರಿಗೂ ಕೌರವರಿಗೂ ಯುದ್ಧ ನಡೆಯಿತು. ಕರ್ಣ ಚಿತ್ರಸೇನನೆಂಬ ಗಂಧರ್ವನಿಂದ ಅಪಮಾನಿತನಾದ. ಪಾಂಡವರ ಅಜ್ಞಾತವಾಸದ ಅವಧಿ ತೀರಿ ಉತ್ತರಗೋಗ್ರಹಣ ಕಾಲದಲ್ಲಿ ಯುದ್ಧವಾಗಲು ಕರ್ಣ ತನ್ನ ಸೇಡನ್ನು ಅರ್ಜುನನ ಮೇಲೆ ತೀರಿಸಿಕೊಳ್ಳತೊಡಗಿದ. ಕೊನೆಗೆ ಸಮಸ್ತ ಕೌರವ ಸೈನ್ಯವೇ ಅರ್ಜುನನ ಸಮ್ಮೋಹನಾಸ್ತ್ರಕ್ಕೆ ಗುರಿಯಾಗಿ ನಿದ್ರಾಪರವಶವಾಯಿತು. ವಿರಾಟನ ಸೈನ್ಯಕ್ಕೆ ಜಯ ಲಭಿಸಿತು.

ಮಹಾಭಾರತ ಯುದ್ಧ/ಕುರುಕ್ಷೇತ್ರ

[ಸಂಪೊಲಿಪುಲೆ]
ಕರ್ಣಾವಸಾನ. ರಾಜಾ ರವಿವರ್ಮನ ವರ್ಣಚಿತ್ರ
  • ಮಹಾಭಾರತ ಕದನ ಸನ್ನಿಹಿತವಾಗಲು ಕೃಷ್ಣ ಪಾಂಡವರ ಪರವಾಗಿ ಕೌರವರೊಡನೆ ಸಂಧಾನವನ್ನು ನಡೆಸಿದ್ದ. ಹಿತೋಕ್ತಿಗಳಾವುವೂ ಫಲಿಸದೆ ಸಮರವೇ ಅನಿವಾರ್ಯವಾದ ಸಂದರ್ಭದಲ್ಲಿ ಕೃಷ್ಣ ಕರ್ಣನೊಬ್ಬನನ್ನೇ ಗುಟ್ಟಾಗಿ ಕರೆದು ಅವನ ಜನ್ಮವೃತ್ತಾಂತವನ್ನು ತಿಳಿಸಿ, ಪಾಂಡವರ ಕಡೆಗೆ ಬರುವಂತೆ ಪ್ರೇರಿಸಿದ. ಸ್ವಾಮಿ ಭಕ್ತನಾದ ಕರ್ಣ ಕೃಷ್ಣನ ತಂತ್ರಕ್ಕೆ ಒಡಂಬಡಲಿಲ್ಲ.
  • ಅನಂತರ ಕುಂತಿಯೇ ಕರ್ಣನನ್ನು ಗಂಗಾತೀರದಲ್ಲಿ ಕಂಡು ತನ್ನ ಮಗನ ಮನಸ್ಸನ್ನು ಒಲಿಸಿಕೊಳ್ಳಲುಯತ್ನಿಸಿದಳು. ಆಗಲೇ ಸೂರ್ಯನೂ ಪ್ರತ್ಯಕ್ಷನಾಗಿ ಕರ್ಣನಿಗೆ ಹಿತೋಪದೇಶವನ್ನಿತ್ತು ತಾಯಿ ಮಾತಿಗೆ ಒಪ್ಪುವಂತೆ ಕೇಳಿಕೊಂಡ. ಸ್ಥಿರಚಿತ್ತನಾದ ಕರ್ಣ ಅವರ ಪ್ರೇರಣೆಗೆ ಓಗೊಡಲಿಲ್ಲ. “ಎಲೈ ತಾಯೇ ನೀನು ನನ್ನನ್ನು ಚಿಕ್ಕಂದಿನಲ್ಲಿ ಕೈಬಿಟ್ಟಿದ್ದರಿಂದ ನಾನು ನಾನಾ ಅಪಮಾನಗಳನ್ನು ಅನುಭವಿಸಬೇಕಾಯಿತು, ಈಗ ನಿನ್ನ ಮಾತನ್ನು ಕೇಳಿ, ನನ್ನನ್ನು ಸಾಕಿ ಸಲಹಿ, ಸತ್ಕರಿಸಿದ ಸ್ವಾಮಿಯನ್ನು ವಂಚಿಸಲಾರೆ.
  • ನನಗೂ ಅರ್ಜುನನಿಗೂ ವೈರ ಕಟ್ಟಿಟ್ಟದ್ದೇ ಸರಿ. ನಿನಗಾಗಿ, ಉಳಿದ ನಾಲ್ವರ ಜೀವಕ್ಕೆ ನಾನು ಅಪಾಯವನ್ನು ಮಾಡುವುದಿಲ್ಲ. ನಮ್ಮಿಬ್ಬರಲ್ಲಿ ಯಾರೊಬ್ಬರು ಉಳಿದರೂ ನಿನಗೆ ಐದು ಮಂದಿ ಇದ್ದಂತಾಯಿತಲ್ಲವೇ? ಶ್ರೀಕೃಷ್ಣ ನಿಮ್ಮ ಪಕ್ಷವನ್ನು ವಹಿಸಿರುವುದರಿಂದ ನಿಮಗೆ ಭಯವಿಲ್ಲ ”ಎಂದು ಆತ ತನ್ನ ತಾಯನ್ನು ಸಮಾಧಾನ ಪಡಿಸಿ ಕಳುಹಿಸಿದ. ಯುದ್ಧ ನಿಶ್ಚಯವಾದ ಬಳಿಕ, ಭೀಷ್ಮನಿಗೆ ಪಟ್ಟಕಟ್ಟುವ ಕಾಲದಲ್ಲಿ ಕರ್ಣ ಅವನನ್ನು ಹಂಗಿಸಿದ.
  • ಆತ ಪಾಂಡವ ಪಕ್ಷಪಾತಿಯೆಂದೂ ಶತ್ರುಗಳೊಡನೆ ಹೋರಾಡಲು ಅಸಮರ್ಥನೆಂದೂ ಆಕ್ಷೇಪಿಸಿದ. ಆಗ ಕೃಪ, ದ್ರೋಣ ಮೊದಲಾದವರೆಲ್ಲ ಕರ್ಣನನ್ನು ಅವಹೇಳನ ಮಾಡಿದರು. ಭೀಷ್ಮನೂ ಕುಪಿತನಾದ. ಭೀಷ್ಮ ಬದುಕಿರುವವರೆಗೂ ತಾನು ಯುದ್ಧ ಮಾಡುವುದಿಲ್ಲವೆಂದು ಕರ್ಣ ಶಸ್ತ್ರಸಂನ್ಯಾಸ ಕೈಕೊಂಡು ಭೀಷ್ಮಾಚಾರ್ಯ ಅತ್ಯದ್ಭುತ ಪರಾಕ್ರಮದಿಂದ ಹತ್ತು ದಿನಗಳವರೆಗೆ ಯುದ್ಧಮಾಡಿ, ಕಡೆಗೆ ಶರಶಯ್ಯಾಗತನಾದ ಬಳಿಕ ಕರ್ಣನಿಗೆ ಭೀಷ್ಮನಲ್ಲಿ ಮತ್ತೆ ಭಕ್ತಿಮೂಡಿತು.
  • ಅವನ ಬಳಿಗೆ ತೆರಳಿ ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡ; ದ್ರೋಣ ಸೇನಾಧಿಪತ್ಯ ವಹಿಸಿದಾಗ ಕರ್ಣ ದಿಟ್ಟತನದಿಂದ ಹೋರಾಡಿದ. ಇಂದ್ರ ಅವನಿಗೆ ಅನುಗ್ರಹಿಸಿದ್ದ ಶಕ್ತ್ಯಾಯುಧ ಇರುವವರೆಗೂ ಕರ್ಣ ಅಜೇಯನೆಂದು ತಿಳಿದು ಕೃಷ್ಣ ರಾತ್ರಿಯುದ್ಧದಲ್ಲಿ ಘಟೋತ್ಕಚನನ್ನು ಮುಂದೆಬಿಟ್ಟು ಕರ್ಣನ ಶಕ್ತ್ಯಾಯುಧ ಅವನ ಮೇಲೆ ವ್ಯರ್ಥವಾಗುವಂತೆ ಮಾಡಿಸಿದ. ದ್ರೋಣರ ಅನಂತರ ಸೇನಾಧಿಪತ್ಯವನ್ನು ಕರ್ಣನೇವಹಿಸಿಕೊಂಡ.
  • ತನ್ನ ಎದುರಾಳಿಯಾದ ಅರ್ಜುನನಿಗೆ ಕೃಷ್ಣನಂಥವ ಸಾರಥಿಯಾಗಿರುವಂತೆ ಅಶ್ವವಿದ್ಯೆಯಲ್ಲಿ ಪ್ರವೀಣನಾದ ಶಲ್ಯ ತನಗೆ ಸಾರಥಿಯಾದರೆ ಜಯ ನಿಶ್ಚಯವೆಂದು ದುರ್ಯೋಧನನಲ್ಲಿ ವಿಜ್ಞಾಪಿಸಿಕೊಂಡ; ದುರ್ಯೋಧನ ಶಲ್ಯನನ್ನು ಬಹು ಕಷ್ಟದಿಂದ ಒಪ್ಪಿಸಿ ಕರ್ಣನಿಗೆ ಸಾರಥಿಯನ್ನಾಗಿ ಮಾಡಿದ. ಕರ್ಣಾರ್ಜುನರ ಸಂಗ್ರಾಮ ಬಹಳ ಉಗ್ರವಾಗಿ ಸಾಗಿತು. ಕೃಷ್ಣನಿಗಾದರೋ ಅಂದಿನ ಕಾಳಗದಲ್ಲಿ ಕರ್ಣನ ಮರಣವಾಗಲೇಬೇಕೆಂದು ಅಪೇಕ್ಷೆ.
  • ವೀರರಿಬ್ಬರಿಗೂ ಕಾಳಗ ನಡೆಯುತ್ತಿರಲು ಕರ್ಣ ತನ್ನಲ್ಲಿದ್ದ ಸರ್ಪಾಸ್ತ್ರವನ್ನು ತೆಗೆದು ಅರ್ಜುನನ ತಲೆಗೆ ಗುರಿಯಿಟ್ಟ. ಆ ದಿವ್ಯಾಸ್ತ್ರವನ್ನು ಅರ್ಜುನನ ಎದೆಗೆ ಗುರಿಯಿಟ್ಟಿದ್ದೇ ಅದರೆ ತಮಗೆ ಜಯ ನಿಶ್ಚಯ ಎಂದು ಶಲ್ಯ ಕರ್ಣನನ್ನು ಎಚ್ಚರಿಸಿದ. ತಾನು ಒಂದು ಬಾರಿ ಇಟ್ಟ ಗುರಿಯನ್ನು ಮತ್ತೆ ತೆಗೆಯುವವನಲ್ಲವೆಂದು ಕರ್ಣ ಹಟ ಹಿಡಿದ. ತನ್ನ ಇಷ್ಟದಂತೆಯೇ ಬಾಣವನ್ನು ಬಿಡುವ ಹೊತ್ತಿಗೆ ಸರಿಯಾಗಿ ಅತ್ತ ಕೃಷ್ಣ ಅರ್ಜುನನ ರಥವನ್ನು ನೆಲಕ್ಕೆ ಒತ್ತಿದ. ಬಾಣ ಅರ್ಜುನನ ಕಿರೀಟವನ್ನು ಮಾತ್ರ ಭೇದಿಸಿಕೊಂಡು ಹೋಯಿತು.
  • ಕರ್ಣ ದಿಕ್ಕುತೋಚದಂತಾದ. ಈ ಮಧ್ಯೆ ಹಿಂದೊಮ್ಮೆ ಬ್ರಾಹ್ಮಣನ ಶಾಪಕ್ಕೆ ಗುರಿಯಾಗಿದ್ದುದರಿಂದ ಅದೇ ಸಮಯದಲ್ಲಿ ಕರ್ಣನ ರಥದ ಚಕ್ರ ಭೂಮಿಯಲ್ಲಿ ಹೂತುಕೊಂಡಿತು. ಅದನ್ನು ಸರಿಪಡಿಸಿಕೊಳ್ಳಲು ರಥದಿಂದ ಕೆಳಗಿಳಿಯಲು, ಕರ್ಣನನ್ನು ಸಂಹರಿಸಲು ಅದೇ ತಕ್ಕ ಸಮಯವೆಂದು ಕೃಷ್ಣ ಅರ್ಜುನನನ್ನು ಪ್ರಚೋದಿಸಿದ. ನಿರಾಯುಧನಾದ ಕರ್ಣನನ್ನು ಹೇಗೆ ಕೊಲ್ಲುವುದೆಂದು ಕನಿಕರದಿಂದ ಅರ್ಜುನ ಹಿಂತೆಗೆಯಲು, ಕೃಷ್ಣ ಕರ್ಣನ ಅಧರ್ಮ ಕಾರ್ಯಗಳನ್ನೆಲ್ಲ ಪಟ್ಟಿಮಾಡಿ ಹೇಳಿ ಕಾರ್ಯನಿರತನಾಗಲು ಬಲಾತ್ಕಾರ ಮಾಡಿದ.
  • ಅರ್ಜುನ ನಿರ್ವಾಹವಿಲ್ಲದೆ ಕರ್ಣನ ಮೇಲೆ ಅಂಜಲಿಕಾಸ್ತ್ರವನ್ನು ಪ್ರಯೋಗಿಸಿದ. ಅಸಹಾಯಕನಾದ ಕರ್ಣ ಆ ಅಸ್ತ್ರಕ್ಕೆ ಗುರಿಯಾಗಿ ಹತನಾದ. ಭಾರತ ಯುದ್ಧವೆಲ್ಲ ಮುಗಿದ ಬಳಿಕ, ಧರ್ಮರಾಯ ಸತ್ತವರಿಗೆ ಉತ್ತರಕ್ರಿಯಾದಿಗಳನ್ನು ಮಾಡುವ ಸಂದರ್ಭದಲ್ಲಿ ಕುಂತಿ ಓಡಿಬಂದು ಕರ್ಣ ತನ್ನ ಮಗನೆಂದೂ ಪಾಂಡವರಿಗೆಲ್ಲ ಅವನೇ ಹಿರಿಯನೆಂದೂ ಮೊದಲು ಅವನಿಗೆ ಕರ್ಮಾದಿಗಳು ನಡೆಯಬೇಕೆಂದೂ ತಿಳಿಸಿದಳು. ಈ ವೃತ್ತಾಂತವನ್ನು ಕೇಳಿ ಧರ್ಮರಾಯ ಚಕಿತನಾಗಿ ತಾಯಿ ಮಾಡಿದ ಅಕಾರ್ಯಕ್ಕಾಗಿ ಅವಳ ಮೇಲೆ ಕೋಪಗೊಂಡ. ಪಾಂಡವರೆಲ್ಲರೂ ಕರ್ಣನಿಗಾದ ದುರ್ದೆಸೆಗಾಗಿ ಮರುಗಿದರು. ಕರ್ಣನಿಗೆ ಕ್ಷತ್ರಿಯೋಚಿತವಾದ ಸಂಸ್ಕಾರಗಳು ನಡೆದುವು.

ಭಾರತೀಯ ಸಾಹಿತ್ಯದಲ್ಲಿ ಕರ್ಣ

[ಸಂಪೊಲಿಪುಲೆ]
  • ವ್ಯಾಸಭಾರತದಲ್ಲಿ ಕರ್ಣನನ್ನು ಮೊದಲಿನಿಂದ ಕಡೆಯ ವರೆಗೂ ದುರ್ಯೋಧನನ ದುಷ್ಟಚತುಷ್ಟಯದಲ್ಲೊಬ್ಬನೆನ್ನುವಂತೆ ವರ್ಣಿಸಲಾಗಿದೆ. ವಾಸ್ತವಿಕವಾಗಿ ಕರ್ಣನಿಗೆ ಜೀವನದಲ್ಲಿ ಒದಗಿಬಂದ ದುರ್ದೈವ ಪರಂಪರೆಯನ್ನು ಗಮನಿಸಿ ಅವನ ಬಗ್ಗೆ ಸಹಾನುಭೂತಿಯಿಂದ ನೋಡಿದ ಸಂಸ್ಕೃತ ಕವಿಗಳಲ್ಲಿ ಭಾಸನೇ ಬಹಳ ಹಳಬನೆಂದು ತೋರುತ್ತದೆ.
  • ಈತ ಕರ್ಣಭಾರ ಎಂಬ ತನ್ನ ಏಕಾಂಕ ನಾಟಕದಲ್ಲಿ ಕರ್ಣನ ದಾನ ಗುಣಕ್ಕೆ ಪ್ರಾಶಸ್ತ್ಯವಿತ್ತು ಆವನ ಹಿರಿಮೆಯನ್ನು ಬೆಳಗಿಸಿದ್ದಾನೆ; ಪಂಚರಾತ್ರವೆಂಬ ಮತ್ತೊಂದು ಕೃತಿಯಲ್ಲಿ ಕರ್ಣ ದುರ್ಯೋಧನನ ಆಪ್ತಮಿತ್ರನೆನಿಸಿದರೂ ಪಾಂಡವರ ಬಗ್ಗೆ ವೃಥಾ ಆಗ್ರಹವಿಲ್ಲದವನೆಂಬಂತೆ ಅವನ ಪಾತ್ರವನ್ನು ಚಿತ್ರಿಸಿದ್ದಾನೆ. ಈ ನೂತನ ದೃಷ್ಟಿ ಪರಂಪರೆಯೇ ಮುಂದುವರಿಯಿತೋ ಎಂಬಂತೆ ಕನ್ನಡದ ಆದಿಕವಿಯಾದ ಪಂಪ ಕರ್ಣನ ಪಾತ್ರವನ್ನು ನಿರೂಪಿಸುವಲ್ಲಿ ತುಂಬ ಉದಾರವಾಗಿ ವರ್ತಿಸಿದ್ದಾನೆ.
  • ಪಂಪನಲ್ಲಿ ಕಥಾನಾಯಕ ಅರ್ಜುನನಾದರೆ, ಪ್ರತಿನಾಯಕ ಕರ್ಣನಾಗುತ್ತಾನೆ. ಕರ್ಣನ ಜನನ ಬಾಲ್ಯಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿ ಆತ ಪರಶುರಾಮನಿಂದ ಶಾಪಗ್ರಸ್ತನಾಗುವ ವಿಷಯವನ್ನು ಹೃದಯ ಕರಗುವಂತೆ ವರ್ಣಿಸಿದ್ದಾನೆ. ಕೌರವರ್ಗೆಲ್ಲಂ ಪ್ರಾಣಂಬರ್ಪಾಕೃತಿಯೊಳೆ ಬಾಣಾಸನ ಬಾಣಪಾಣಿ ಕರ್ಣಂ ಬಂದಂ-ಎಂದು ಕರ್ಣನ ಆಗಮನವನ್ನು ಅರ್ಥವತ್ತಾಗಿ ಹೇಳಿದ್ದಾನೆ.
  • ಕರ್ಣದುರ್ಯೋಧನರ ಸ್ನೇಹವಂತೂ ಅಸದೃಶವಾದುದು. ‘ಪೊಡಮಡುವರ್ ಜೀಯೆಂಬರ್ ಕುಡುದಯೆಗೆಯ್ ಏಂ ಪ್ರಸಾದಮೆಂಬಿವು ಪೆರೊಳ್ ನಡೆಗೆಮ್ಮೆ ನಿನ್ನಯೆಡೆಯೊಳ ನಡೆಯಲ್ವೇಡೆನಗೆ ಕೆಳೆಯನೈ ರಾಧೇಯಾ’ ಎಂದು ದುರ್ಯೋಧನ ಅವನನ್ನು ಅತ್ಯಂತ ಪ್ರೀತಿಯಿಂದ ಸತ್ಕರಿಸುತ್ತಾನೆ. ಈ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕರ್ಣನನ್ನು ಕವಿ ‘ಏಂ ಕಲಿಯೋ ಚಾಗಿಯೋ ರವಿತನಯಂ’ ಎಂದು ಮೇಲಿಂದ ಮೇಲೆ ಕೊಂಡಾಡಿದ್ದಾನೆ.
  • ಕೃಪ ದ್ರೋಣಾದಿಗಳು ಸೂತಪುತ್ರನೆಂದು ಹೀಯಾಳಿಸಲಾಗಿ ಕರ್ಣ ನಾಚಿ ತಲೆತಗ್ಗಿಸುತ್ತಾನೆ. ಕೃಷ್ಣನ ಮೂಲಕ ತನ್ನ ಜನ್ಮವೃತ್ತಾಂತ ತಿಳಿದ ಬಳಿಕ ಕರ್ಣನಿಗೆ ಒಂದು ಕಡೆ ಸಂತೋಷ; ಮತ್ತೊಂದು ಕಡೆ ಸಂಕಟ, ಪಾಂಡವರು ತನ್ನ ತಮ್ಮಂದಿರೆಂದು ತಿಳಿದ ಮೇಲೆ ಅವರನ್ನು ಕೊಲ್ಲುವುದಕ್ಕೆ ಕೈ ಬಾರದೆಂದು ಕೊರುಗುತ್ತಾನೆ. ಅವರನ್ನು ಕೊಲ್ಲದಿದ್ದರೆ ತನ್ನ ಸ್ವಾಮಿಗೆ ದ್ರೋಹ ಬಗೆದಂತಾಗುವುದೆಂದೂ ನೊಂದುಕೊಳ್ಳುತ್ತಾನೆ.
  • ಕಡೆಗೆ ಯುದ್ಧ ಜ್ವಾಲೆಗೆ ತನ್ನನ್ನೇ ಸಮರ್ಪಿಸಿಕೊಳ್ಳವುದೆಂದು ನಿಶ್ಚಯಿಸುತ್ತಾನೆ. ಕೃಷ್ಣ ಕರ್ಣನನ್ನು ಭೇದಿಸಲಾರದೆ, ಕುಂತಿಗೆ ಆ ಕೆಲಸವನ್ನು ಒಪ್ಪಿಸಿಕೊಡುತ್ತಾನೆ. ತಾಯಿಯನ್ನು ಕಂಡಕೂಡಲೆ ಕರ್ಣ ಪುಳಕಿತನಾಗಿ ‘ಚಲಮುಂ ಚಾಗಮುಮಳವುಂ ಕಲಿತನಮುಂ ಕುಲಮುಮೀಗಳೆನ್ನಯ ಮೆಯ್ಯೂಳ್ ನೆಲಸಿದುವು ನಿಮ್ಮ ಕರುಣಾಬಲದಿಂ ನೀವೆನ್ನನಿಂದಿಂ ಮಗನೆಂದುದ’ ಎಂದು ಹಿಗ್ಗುತ್ತಾನೆ.
  • ಕುಂತಿ ಕರ್ಣನನ್ನು ಕೌರವರ ಪಕ್ಷ ಬಿಟ್ಟು ಪಾಂಡವರ ಕಡೆಗೆ ಬಾ ಎನ್ನಲು ‘ಮೀಂಗುಲಿಗನೆನಾಗಿಯುಮಣಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾದಂಗೆನಗೆ ಬಿಸುಡಲಕ್ಕುಮೆ’ ಎಂದು ಉದಾತ್ತವಾಗಿ ನುಡಿದು, ಕಟ್ಟಕಡೆಗೆ ‘ಪಿಡಿಯೆಂ ಪುರಿಗಣೆಯಂ ನರನೆಡೆಗೊಂಡೊಡಮುದ ನಿನ್ನ ಮಕ್ಕಳನಿನ್ನೇರ್ದೊಡಮಳ್ ಮೆ’ ಎಂದು ವಾಗ್ದಾನ ಮಾಡುತ್ತಾನೆ.
  • ಸಂಸ್ಕೃತ ಮಹಾಭಾರತದಲ್ಲಿ ಕರ್ಣನನ್ನು ಸಾರಥಿಯಾದ ಅದಿರಥನ ಮಗನೆಂದು ಹೇಳಿದ್ದರೆ, ಪಂಪನಲ್ಲಿ ಅವನನ್ನು ಮೀಂಗುಲಿಗನೆಂದು ವಿಶದಪಡಿಸಿದೆ. ಇದಲ್ಲದೆ ಕರ್ಣ ಕುಂತಿಯನ್ನು ಕಂಡು ಮಾತನಾಡುವ ರೀತಿನೀತಿಗಳು ತುಂಬ ಭಿನ್ನವಾಗಿವೆ. ಮುಂದೆ ಭೀಷ್ಮನನ್ನು ಕುರಿತು ಕಟುವಾಗಿ ಮಾತನಾಡಿದಾಗ, ಇತರರು ಅವನನ್ನು ಹೀನಕುಲಜನೆಂದು ಅಲ್ಲಗೆಳೆಯಲು, ತನ್ನ ಜನ್ಮವೃತ್ತಾಂತವನ್ನು ಅರಿತ ಕರ್ಣ ಆಗ ಎಂದಿನಂತಲ್ಲದೆ, ‘ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಮಭಿಮಾನವೊಂದೆ ಕುಲಮಣ್ಮು ಕುಲಂ ಬಗೆವಾಗಳೀ ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ’ ಎಂದು ಆತ್ಮವಿಶ್ವಾಸದಿಂದ ಕಿಡಿಕಿಡಿಯಾಗುತ್ತಾನೆ.
  • ತಮ್ಮ ಕ್ಷಮಾಪಣೆ ಕೇಳುವಲ್ಲಿಯೂ ಈತನ ನಯವಿನಯಗಳನ್ನು ಕಂಡು ಭೀಷ್ಮರು ಸಂತೋಷಪಡುತ್ತಾರೆ. ಕರ್ಣಾರ್ಜುನರ ಯುದ್ಧವನ್ನಂತೂ ಪಂಪ ಬಹಳ ಪ್ರಭಾವಶಾಲಿಯಾಗಿ ವರ್ಣಿಸಿದ್ದಾನೆ. ತನಗೆ ಅರಿವಿಲ್ಲದೆ ತನ್ನ ಬತ್ತಳಿಕೆಯಲ್ಲಿ ಬಂದು ಸೇರಿದ್ದ ಸರ್ಪಾಸ್ತ್ರವನ್ನು ಕಂಡು, ಅದರ ಮರುನುಡಿಗೆ ಕಿವಿಗೊಡದೆ ತನ್ನ ತಾಯಿಗಿತ್ತ ವಚನವನ್ನು ಚಾಚೂತಪ್ಪದೆ ಕರ್ಣ ನಡೆಸುತ್ತಾನೆ.
  • ಕರ್ಣನ ಮರಣವನ್ನು ಕಂಡು ಪಂಪನ ಹೃದಯ ಕರಗುತ್ತದೆ. ಅವನನ್ನು ‘ಚಾಗದ ನನ್ನಿಯ ಕಲಿತನದಾಗರಂ’ ಎಂದು ಕೊಂಡಾಡುತ್ತಾನೆ. ‘ಪಿಡಿದನೆ ಪುರಿಗಣೆಯನೆರಡಿದನೆ ಬಳ್ಕಿದನೆ ತಾನೆ ತನ್ನನೆ ಚಲಮಂ ಪಿಡಿದದನ್’ ಎಂದು ದೇವತೆಗಳ ಪಡೆ ಹೊಗಳುತ್ತದೆ. ಮಹಾಭಾರತದ ವೀರಾಧಿವೀರರಲ್ಲಿ ಒಬ್ಬನೂ ಪಂಪನ ಕೃತಿಯ ಪ್ರತಿನಾಯಕನೂ ಆದ ಕರ್ಣನನ್ನು ಕುರಿತ ಚರಮಶ್ಲೋಕವನ್ನಂತು ಎಂದೆಂದಿಗೂ ಮರೆಯುವಂತಿಲ್ಲ.
  • ನೆನೆಯದಿರಣ್ಣ ಭಾರತದೊಳಿಂ ಪೆರಾರುಮನೊಂದೆ ಚಿತ್ತದಿಂ ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇ ಕರ್ಣನ ಕಡುನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕರ್ಣನ ಪಡೆಮಾತಿನೊಳ್ ಪುದಿದು ಕರ್ಣರಸಾಯನಮಲ್ತೆ ಭಾರತಂ ಕನ್ನಡದ ಮತ್ತೊಬ್ಬ ಮಹಾಕವಿಯಾದ ಕುಮಾರವ್ಯಾಸನೂ ಹೀಗೆಯೇ ಕರ್ಣನ ಪಾತ್ರಕ್ಕೆ ಅಪೂರ್ವವಾದ ಕಾಂತಿಯನ್ನು ನೀಡಿದ್ದಾನೆ.
  • ಇಟ್ಟಗುರಿಯನ್ನು ಬದಲಿಸುವುದಿಲ್ಲವೆಂದು ವ್ಯಾಸಭಾರತದಲ್ಲಿ ಶಲ್ಯನಿಗೆ ಉತ್ತರವಿತ್ತ ಕರ್ಣ, ಪಂಪಭಾರತದಲ್ಲಿ ತನ್ನ ತಾಯಿಗೆ ಪುರಿಗಣೆಯನ್ನು ಪ್ರಯೋಗಿಸುವುದಿಲ್ಲವೆಂದು ವಚನವೀಯುತ್ತಾನೆ. ಕುಮಾರವ್ಯಾಸಭಾರತದಲ್ಲಿ ಕುಂತಿಗೆ ತೊಟ್ಟಬಾಣವನ್ನು ತೊಡುವುದಿಲ್ಲವೆಂದು ಕರ್ಣ ವಾಗ್ದಾನ ಮಾಡುತ್ತಾನೆ. ಕಡೆಗಾಲದಲ್ಲಿ ಕೃಷ್ಣ ಕರ್ಣನಿಗೆ ತನ್ನ ದಿವ್ಯರೂಪವನ್ನು ತೋರಿ ಅವನನ್ನು ಕೃತಾರ್ಥನನ್ನಾಗಿ ಮಾಡುತ್ತಾನೆ.

ಉಲ್ಲೇಖಗಳು

[ಸಂಪೊಲಿಪುಲೆ]
  1. "ಆರ್ಕೈವ್ ನಕಲು". Archived from the original on 2010-03-23. Retrieved 2017-05-16.

ವರ್ಗ:ಮಹಾಭಾರತದ ಪತ್ಳುರ

"https://tcy.wikipedia.org/w/index.php?title=ಕರ್ಣ&oldid=141730"ಡ್ದ್ ದೆತ್ತೊಂದುಂಡು